ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಪರಿಚಯ:

ಭಾರತದಲ್ಲಿ ಕಾನೂನು ಆಯೋಗದ ಹಿನ್ನೆಲೆ:

1833 ರ ಚಾರ್ಟರ್ ಅಧಿನಿಯಮದ ಅಡಿಯಲ್ಲಿ 1834 ರಲ್ಲಿ ಮೊದಲ ಕಾನೂನು ಆಯೋಗದ ಸ್ಥಾಪನೆಯೊಂದಿಗೆ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತದಲ್ಲಿ ಕಾನೂನು ಆಯೋಗದ ಇತಿಹಾಸವು ಪ್ರಾರಂಭವಾಯಿತು. ಕಾನೂನು ಆಯೋಗದ ಮೊದಲ ಅಧ್ಯಕ್ಷರಾದ ಲಾರ್ಡ್‌ ಮೆಕಾಲೆ, ಕಾನೂನು ಕ್ಷೇತ್ರದ ಅಗ್ರಗಣ್ಯರಲ್ಲಿ ಒಬ್ಬರು. ಹೀಗೆ ರಚಿಸಲಾದ ಮೊದಲ ಕಾನೂನು ಆಯೋಗವು ದಂಡ ಸಂಹಿತೆ ಮತ್ತು ದಂಡ ಪ್ರಕ್ರಿಯಾ ಸಂಹಿತೆಯ ಕಾನೂನುಗಳ ಕ್ರೋಡೀಕರಣಕ್ಕೆ ಶಿಫಾರಸ್ಸು ಮಾಡಿತು. 1853, 1861, 1879 ರಲ್ಲಿ ರಚಿಸಲಾದ ನಂತರದ ಕಾನೂನು ಆಯೋಗಗಳೂ ಸಹ ಅನೇಕ ಕಾನೂನುಗಳನ್ನು ರಚಿಸುವಲ್ಲಿ ಜವಾಬ್ದಾರಿ ನಿಭಾಯಿಸಿದ್ದು, ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಭಾರತೀಯ ಸಿವಿಲ್‌ ಪ್ರಕ್ರಿಯೆ ಸಂಹಿತೆ, ಭಾರತೀಯ ಒಪ್ಪಂದ ಅಧಿನಿಯಮ, ಭಾರತೀಯ ಸಾಕ್ಷ್ಯಾ ಅಧಿನಿಯಮ ಮತ್ತು ಸ್ವತ್ತು ವರ್ಗಾವಣೆ ಅಧಿನಿಯಮ ಇತ್ಯಾದಿ.

   1947 ರಲ್ಲಿ ಬ್ರಿಟಿಷ್‌ ಆಡಳಿತ ಕೊನೆಗೊಂಡು, ಭಾರತವು ಸ್ವಾತಂತ್ರ್ಯ ಪಡೆದ ನಂತರ ನಮ್ಮ ದೇಶದ ಆಡಳಿತಕ್ಕಾಗಿ ಸಂವಿಧಾನವನ್ನು ರೂಪಿಸಲು ಭಾರತದ ಉತ್ಕೃಷ್ಟ ನಾಗರೀಕರನ್ನೊಳಗೊಂಡ ಸಂವಿಧಾನದ ಸಭೆ ರಚಿಸಲಾಯಿತು. ಅವರು 1950 ರ ಜನವರಿ 26 ರಂದು ಜಾರಿಗೆ ಬಂದ ಪ್ರಸ್ತುತ ಸಂವಿಧಾನವನ್ನು ನಮಗೆ ನೀಡಿದರು.

        ಸ್ವತಂತ್ರ್ಯ ಭಾರತದ ಮೊದಲ ಕಾನೂನು ಆಯೋಗವನ್ನು 1955 ರಲ್ಲಿ ಸ್ಥಾಪಿಸಲಾಯಿತು ಮತ್ತು ಅದರ ಅಧ್ಯಕ್ಷತೆಯನ್ನು ಅಂದಿನ ಭಾರತದ ಅಟಾರ್ನಿ ಜನರಲ್‌ರಾಗಿದ್ದ ಶ್ರೇಷ್ಠ ವಕೀಲರಾದ ಶ್ರೀ ಎಂ.ಸಿ.ಸೆತಲ್ವಾಡ್‌ರವರು ವಹಿಸಿದ್ದರು. ಅಂದಿನಿಂದ ಕಾನೂನು ಆಯೋಗಗಳನ್ನು ನಿಯತಕಾಲಿಕವಾಗಿ ರಚಿಸಲಾಗುತ್ತಿದೆ ಮತ್ತು ಹೆಚ್ಚಿನವುಗಳ ಅಧ್ಯಕ್ಷತೆಯನ್ನು ಭಾರತದ ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳು ವಹಿಸಿದ್ದರು. ಭಾರತದ ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ.ಜಸ್ಟಿಸ್‌ ಎ.ಆರ್.ಲಕ್ಷ್ಮಣನ್‌ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 01.09.2006 ರಿಂದ ಜಾರಿಗೆ ಬರುವಂತೆ ಹದಿನೆಂಟನೇ ಕಾನೂನು ಆಯೋಗವನ್ನು ರಚಿಸಲಾಯಿತು.

 

ಕರ್ನಾಟಕದ ಕಾನೂನು ಆಯೋಗದ ಸ್ಥಾಪನೆಯ ಹಿನ್ನಲೆ:

      ಕೇಂದ್ರ ಕಾನೂನು ಆಯೋಗದ ರೀತಿಯಲ್ಲಿ ಕಾಯ ನಿರ್ವಹಿಸಲು ವಿವಿಧ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಕಾನೂನುಗಳ ಕುರಿತು ಕಾರ್ಯ ನಿರ್ವಹಿಸಲು, ರಾಜ್ಯ ಕಾನೂನು ಆಯೋಗಗಳ ಸ್ಥಾಪನೆಯ ಬಗ್ಗೆ ಪ್ರೋತ್ಸಾಹ ನೀಡುವತ್ತ ಕೇಂದ್ರ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಎ.ಆರ್.ಲಕ್ಷ್ಮಣನ್‌ ರವರು ತೀವ್ರ ಆಸಕ್ತಿ ವಹಿಸಿದ್ದರು. ಆ ಸಮಯಕ್ಕೆ ಕೆಲವು ರಾಜ್ಯಗಳಲ್ಲಿ ಮಾತ್ರ ಕಾನೂನು ಆಯೋಗಗಳನ್ನು ಸ್ಥಾಪಿಸಲಾಗಿತ್ತು. ಕಾನೂನು ಆಯೋಗಗಳನ್ನು ಸ್ಥಾಪಿಸದೆ ಇದ್ದಂತಹ ರಾಜ್ಯಗಳಿಗೆ ನ್ಯಾಯಮೂರ್ತಿ ಎ.ಆರ್.ಲಕ್ಷ್ಮಣನ್‌ ರವರು ಪತ್ರಗಳನ್ನು ಬರೆದು ಆದಷ್ಟು ಶೀಘ್ರವಾಗಿ ಕಾನೂನು ಆಯೋಗಗಳನ್ನು ಸ್ಥಾಪಿಸುವಂತೆ ಕೋರಿದ್ದರು. 2008ನೇ ಇಸವಿಯಲ್ಲಿ ನ್ಯಾಯಮೂರ್ತಿ ಎ.ಆರ್.ಲಕ್ಷ್ಮಣನ್‌ ರವರು, ಆಗಿನ ರಾಜ್ಯದ ಮುಖ್ಯಮಂತ್ರಿಗಳು, ವಿಧಾನ ಸಭೆಯ ಸಭಾಪತಿ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರನ್ನು ಭೇಟಿ ಮಾಡಿ ಪ್ರಗತಿಶೀಲ ರಾಜ್ಯವೆಂದು ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯಕ್ಕೆ ಕಾನೂನು ಆಯೋಗದ ಸ್ಥಾಪನೆಯ ಅವಶ್ಯಕತೆಯನ್ನು ಮನವರಿಕೆ ಮಾಡಿದ್ದರು. ಇದರಿಂದ ಪ್ರಭಾವಿತರಾದ ವಿಧಾನ ಸಭೆಯ ಸಭಾಪತಿಯವರು ದಿನಾಂಕ 06.10.2008 ರಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಕರ್ನಾಟಕ ರಾಜ್ಯದ ಕಾನೂನುಗಳ ಮತ್ತು ಸಮಸ್ಯೆಗಳ ಅರಿವು ಇರುವ ಅಲ್ಲದೆ ಕಾನೂನುಗಳ ಸುಧಾರಣೆಯ ಅನುಭವ ಹೊಂದಿರುವ ಉಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಯವರ ಅಥವಾ ಸವೋಚ್ಚ ನ್ಯಾಯಾಲಯದ ವಿ‍ಶ್ರಾಂತ ನ್ಯಾಯಮೂರ್ತಿಯವರ ಅಧ್ಯಕ್ಷತೆಯಲ್ಲಿ ಪೂರ್ಣಾವಧಿಯ ಕಾನೂನು ಆಯೋಗವನ್ನು ಕೂಡಲೇ ಸ್ಥಾಪಿಸುವಂತೆ ಕೋರಿದ್ದರು. ಮಾನ್ಯ ಸಭಾಪತಿಯವರ ಈ ಉಪಕ್ರಮಕ್ಕೆ ಆಗಿನ ವಿಧಾನ ಪರಿಷತ್ತಿನ ಅಧ್ಯಕ್ಷರು ಕೂಡ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಕರ್ನಾಟಕ ರಾಜ್ಯಕ್ಕೆ ಕಾನೂನು ಆಯೋಗದ ಸ್ಥಾಪನೆಯ ಅವಶ್ಯಕತೆಯನ್ನು ಮನಗಂಡ ಕರ್ನಾಟಕ ಸರ್ಕಾರವು, ಕಾನೂನು ಆಯೋಗದ ಸ್ಥಾಪನೆಗೆ ನಿರ್ಣಯ ಕೈಗೊಂಡಿತು.

 

ಕರ್ನಾಟಕ ಕಾನೂನು ಆಯೋಗದ ಸ್ಥಾಪನೆ:

ಆ ನಿರ್ಣಯದಂತೆ, ಕಾನೂನು ಆಯೋಗದ ರಚನೆ ಮಾಡಲು ಸರ್ಕಾರಿ ಆದೇಶ ಸಂಖ್ಯೆ: ಲಾ 42 ಹೆಚ್‌ಆರ್‌ಸಿ 2008 ದಿನಾಂಕ 12.01.2009 ಹೊರಡಿಸಿದೆ. ಪೂರ್ಣಾವಧಿಯ ಒಬ್ಬರು ಅಧ್ಯಕ್ಷರು, ಪೂರ್ಣಾವಧಿಯ ಒಬ್ಬರು ಸದಸ್ಯರು, ಪೂರ್ಣಾವಧಿಯ ಒಬ್ಬರು ಸದಸ್ಯ ಕಾರ್ಯದರ್ಶಿ ಮತ್ತು ಐದು ಜನ ಪದನಿಮಿತ್ತ (Ex-Officio Members) ಗೌರವ ಸದಸ್ಯರುಗಳನ್ನೊಳಗೊಂಡ ಕಾನೂನು ಆಯೋಗದ ರಚನೆಗೆ ಆ ಆದೇಶದಲ್ಲಿ ತಿಳಿಸಲಾಗಿದೆ.

ಸದರಿ ಆದೇಶದ ಷರತ್ತು (ಎ) ಪ್ರಕಾರ ರಾಜ್ಯ ಸರ್ಕಾರವು, ಕರ್ನಾಟಕ ರಾಜ್ಯದ ಕಾನೂನುಗಳ ಮತ್ತು ಸಮಸ್ಯೆಗಳ ಅರಿವು ಇರುವ ಅಲ್ಲದೆ ಕಾನೂನುಗಳ ಸುಧಾರಣೆಯ ಅನುಭವ ಹೊಂದಿರುವ ಉಚ್ಚ ನ್ಯಾಯಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಯವರನ್ನಾಗಲಿ ಅಥವಾ ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಯವರನ್ನಾಗಲಿ ಅಥವಾ ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಯವರನ್ನಾಗಲಿ ಅಧ್ಯಕ್ಷರನ್ನಾಗಿ ನೇಮಿಸಲು ನಿರ್ದೇಶಿಸುತ್ತದೆ.

ಷರತ್ತು (ಬಿ) ಪ್ರಕಾರ ರಾಜ್ಯ ಸರ್ಕಾರವು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಯೊಬ್ಬರನ್ನು ಸದಸ್ಯರನ್ನಾಗಿ ನೇಮಿಸಲು ನಿರ್ದೇಶಿಸುತ್ತದೆ.

ಷರತ್ತು (ಸಿ) ಪ್ರಕಾರ ರಾಜ್ಯ ಸರ್ಕಾರವು ವಿಶ್ರಾಂತ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲು ನಿರ್ದೇಶಿಸುತ್ತದೆ.

ಷರತ್ತು (ಡಿ) ಪ್ರಕಾರ ಈ ಕೆಳಗೆ ಕಾಣಿಸಿದವರನ್ನು ಕಾನೂನು ಆಯೋಗದ ಪದನಿಮಿತ್ತ ಸದಸ್ಯರಾಗಿ ನೇಮಿಸಲು ನಿರ್ದೇಶಿಸುತ್ತದೆ.

 1. ಅಡ್ವೊಕೇಟ್‌ ಜನರಲ್.‌
 2. ಕಾನೂನು ಕಾರ್ಯದರ್ಶಿ, ಕರ್ನಾಟಕ ಸರ್ಕಾರ.
 3. ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ/ಪರಿಷತ್.‌
 4. ಮುಖ್ಯಸ್ಥರು, ಕಾನೂನು ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.
 5. ಕಾರ್ಯದರ್ಶಿ, ಸಂಸಧೀಯ ವ್ಯವಹಾರಗಳ ಇಲಾಖೆ, ಕರ್ನಾಟಕ ಸರ್ಕಾರ.

 ನಂತರ ಕರ್ನಾಟಕ ಸರ್ಕಾರವು ತನ್ನ ಆದೇಶ ಸಂಖ್ಯೆ: ಲಾ 03 ಕೆಎಲ್‌ಎಂ 2011, ಬೆಂಗಳೂರು, ದಿನಾಂಕ: 13ನೇ ಮೇ, 2011 ರನ್ವಯ ನಿರ್ದೇಶಕರು, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ (ಕಾಸಂಸು) ಇವರನ್ನು ಕರ್ನಾಟಕ ಕಾನೂನು ಆಯೋಗದ ಆರನೇ ಪದನಿಮಿತ್ತ ಸದಸ್ಯರಾಗಿ ನೇಮಿಸಿರುತ್ತದೆ.

ಆದೇಶದ ಪ್ಯಾರಾ 2 ರಲ್ಲಿ ಕಛೇರಿಯ ಸ್ಥಳ ಮತ್ತು ಸಿಬ್ಬಂದಿಯ ಬಗ್ಗೆ ಹೇಳುತ್ತದೆ. ಪ್ಯಾರಾ 3 ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಗಳ ಸೇವಾ ಷರತ್ತು ಮತ್ತು ನಿಯಮಗಳ ಬಗ್ಗೆ ಹೇಳುತ್ತದೆ. ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಗಳ ಸೇವಾವಧಿ ಮತ್ತು ಇತರೆ ಸೇವಾ ನಿಯಮಗಳ ಕುರಿತು ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಿ ಪ್ರತ್ಯೇಕ ಆದೇಶ ನೀಡಲು ನಿರ್ದೇಶಿಸುತ್ತದೆ.

ತದ ನಂತರ ಸರ್ಕಾರವು ಆದೇಶ ಸಂಖ್ಯೆ: ಲಾ 19 ಕೆಎಲ್‌ಎಂ 2009, ಬೆಂಗಳೂರು, ದಿನಾಂಕ: 03.03.2009 ರನ್ವಯ ʼಕರ್ನಾಟಕ ರಾಜ್ಯ ಕಾನೂನು ಆಯೋಗʼ ವನ್ನು ʼಕರ್ನಾಟಕ ಕಾನೂನು ಆಯೋಗʼ ಎಂದು ಮರುನಾಮಕರಣ ಮಾಡಿರುತ್ತದೆ.

 

ಇತ್ತೀಚಿನ ನವೀಕರಣ​ : 28-04-2022 03:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕಾನೂನು ಆಯೋಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080